Sunday, June 11, 2006

ಅದೆಲ್ಲಾ ಹೇಳಿದರೆ ನಿಮಗೆ ಹೊಟ್ಟೆಕಿಚ್ಚಾಗುತ್ತದೆ!!!!

ಮೈ ಡಿಯರ್ ಮಕ್ಕಳೆ,
ಹೇಗಿದ್ದೀರಾ? ಶಾಲೆ ಪ್ರಾರಂಭ ಆಗಿ ಒಂದು ವಾರದ ಮೇಲಾಯಿತು ಅಲ್ವಾ?
ಹೇಗನ್ನಿಸುತ್ತಿದೆ;ರಜೆ ಮುಗಿಸಿ ಶಾಲೆಗೆ ಹೋಗುವಾಗ?
ಹೊಸ ಯೂನಿಫಾರಮ್,ಹೊಸ-ಹೊಸ ಪುಸ್ತಕ,ಹೊಸ ಕ್ಲಾಸ್ ಟೀಚರ್........ಚೆನ್ನಾಗಿರಬೇಕಲ್ಲಾ?

ನಾವು ನಿಮ್ಮಷ್ಟರಿದ್ದಾಗ ಇದೇನು ಇರಲಿಲ್ಲ! ಯೂನಿಫಾರಮ್ ನಾವು ಹಾಕಿಕೊಂಡದ್ದು ಎಂಟನೆ ಕ್ಲಾಸಿಗೆ ಬಂದಾಗ! ನಾಲ್ಕನೇ ಕ್ಲಾಸಿನವರಗೆ ನಮಗೆ ನೋಟ್ ಬುಕ್ಕೇ ಇರಲಿಲ್ಲ. ಎಲ್ಲಾ ಸ್ಲೇಟ್ ನಲ್ಲೇ ಮುಗಿಯುತಿತ್ತು. ಇದ್ದರೆ ಒಂದೇ ಒಂದು ನೋಟ್ ಬುಕ್ ಇರುತಿತ್ತು. ಆದರೆ ಅದನ್ನು ಪೆನ್ನಿನಲ್ಲಿ ಬರೆಯುತ್ತಿರಲಿಲ್ಲ, ಪೆನ್ಸಿಲಿನಲ್ಲಿ. ಅಂದಹಾಗೆ ಸ್ಲೇಟು ಅಂದರೆ ಏನು ಗೊತ್ತಾ? ಬಳಪ ಎಂದಾದರು ಮುಟ್ಟಿದ್ದೀರಾ? ಛೇ! ನಿಮ್ಮಲ್ಲಿ ಬಹಳ ಮಕ್ಕಳು ಇವುಗಳನ್ನು ನೋಡಿಯೇ ಇಲ್ಲವೇನೊ?

ನೀವೆಲ್ಲಾ ಎಷ್ಟೆಷ್ಟು ಪುಸ್ತಕಗಳನ್ನು ಹೊತ್ತಿಕೊಂಡು ಹೋಗುತ್ತೀರಾ,ಅಬ್ಬಬ್ಬಾ ! ನಾವಾ? ಅಯ್ಯೋ, ನಮಗೆ ಇದ್ದದ್ದು ಒಂದೆರಡು ಪಾಠದ ಪುಸ್ತಕ(ನೀವು ಅದನ್ನು text book ಅನ್ನುತ್ತೀರಿ) ಜೊತೆಗೆ ಸ್ಲೇಟು ಬಳಪ. ಇನ್ನೊಂದು ವಿಷಯ ಗೊತ್ತಾ? ನಮಗೆ ಹೋಮ್ ವರ್ಕ್ ಇರಲೇ ಇಲ್ಲ. ಶಾಲೆಯಲ್ಲಿ ಬರೆದಿದ್ದು ಅಲ್ಲೆ ಅಳಿಸಿ ಬರುತ್ತಿದ್ದೆವು. ಮನೆಗೆ ಬಂದಾಗ ಆಟ ಊಟ ಅಷ್ಟೆ!

ನಿಮ್ಮ ವಯಸ್ಸಿನಲ್ಲಿ ನಮಗೆ 'ಕಂಪ್ಯೂಟರ್' ಪದದ ಪರಿಚಯವೇ ಇರಲಿಲ್ಲ. ನಮ್ಮ ಟೀಚರ್ ಗಳಿಗೂ ಅದರ ಪರಿಚಯ ಇರಲಿಲ್ಲ ಅನ್ನಿಸುತ್ತೆ. ನಾವು ಕಂಪ್ಯೂಟರ್ ನೋಡಿದ್ದು ಈಗಲೇ. ಆದರೆ ನೀವೆಲ್ಲ ಕಂಪ್ಯೂಟರ್ ಯುಗದ ಮಕ್ಕಳು. ನಿಮಗೆ ಏನೆಲ್ಲಾ ಸೌಲಭ್ಯ ಇದೆ! ಆಡಲು ಕಂಪ್ಯೂಟರ್ ಗೇಮ್ಸ್,ವೀಡಿಯೋ ಗೇಮ್ಸ್, ನೋಡಲು ಕಾರ್ಟೂನ್ ಶೊ, ಪೋಗೊ,wwf, ತಿನ್ನಲು ಕೆಲಾಗ್ಸ್, ಮ್ಯಾಗಿ ನೂಡಲ್ಸ್, ಡೈರಿ ಮಿಲ್ಕ್........ಅಬ್ಬಬ್ಬಾ, ಏನೆಲ್ಲಾ ಇದೆ 'ನಿಮಗೋಸ್ಕರ'? ಆದರೆ ಪ್ರಾಮಾಣಿಕವಾಗಿ ಹೇಳಲಾ? ಇಷ್ಟೆಲ್ಲಾ ಇದ್ದರು ನೀವು ದುರಾದೃಷ್ಟವಂತರು! ನಾವೆ ನಿಜವಾದ ಅದೃಷ್ಟವಂತರು. ನಿಮಗೆ ಇದು ಅರ್ಥ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ತಂದೆ-ತಾಯಿಗೆ ಅರ್ಥ ಆಗುತ್ತೆ, ಕೇಳಿ ನೋಡಿ.

ಮೊನ್ನೆ ರಜೆಯಲ್ಲಿ ನೀವು ಅಜ್ಜಿ ಊರಿಗೆ ಹೋಗಿದ್ರಾ? ಹೋಗಿ ಅಲ್ಲಿ ಏನ್ ಮಾಡಿದ್ರಿ? ಅಜ್ಜಿ ಯಾವ ಕತೆ ಹೇಳಿದರು ನಿಮಗೆ? ಅಲ್ಲಿ ಕೆರೆ ಹತ್ತಿರ ಹೋಗಿದ್ರಾ? ಅಜ್ಜನ ಜತೆ ಮಾವಿನ ತೋಪಿಗೆ ಹೋಗಿ ಮಾವಿನ ಹಣ್ಣು ತಿಂದು ಬಂದಿರಾ? ಅಲ್ಲಿ ಮರಕ್ಕೆ ಜೋಕಾಲಿ ಕಟ್ಟಿ ಜೀಕಿದ್ರಾ? ಇದ್ಯಾವುದು ಮಾಡಿಲ್ಲ ಅಲ್ವಾ? ನೀವೆಲ್ಲ ಏನೇನು ಮಾಡಿದ್ರಿ ಗೊತ್ತು. ಒಂದಿಷ್ಟು ಪೊಗೊ ನೋಡಿದ್ರಿ, wwf 'enjoy' ಮಾಡಿದ್ರಿ, fanatcy parkಗೆ ಹೋಗಿರಬಹುದು, harry potter ಚಿತ್ರ ನೋಡಿರಬಹುದು. ಅಷ್ಟೆ ಅಲ್ವಾ? ನಿಮ್ಮ ವಯಸ್ಸಿನಲ್ಲಿ ನಾವು ಇಂತಹ ರಜೆಯಲ್ಲಿ ಎಷ್ಟು ಮಜಾ ಮಾಡುತ್ತಿದ್ದೆವು! ರಜೆ ಬಂದರೆ ಸಾಕು, ಅಜ್ಜಿ ಊರಿಗೆ ರವಾನೆ. ಅಲ್ಲಿ ಅಜ್ಜಿಯಿಂದ ದಿನಕ್ಕೊಂದು ಕತೆ. ಬೆಳಿಗ್ಗೆ ಹೊತ್ತು ಅಜ್ಜನ ಜೊತೆ ತೋಟದಲ್ಲಿ ಸುತ್ತಾಟ. ಕೆರೆಗೂ ಹೋಗುತಿತ್ತು ನಮ್ಮ ಸವಾರಿ. ನೀವು ಎಂದಾದರು ಮಾವಿನ ಕಾಯಿ ತಿಂದಿದ್ದೀರಾ, ಉಪ್ಪು ಖಾರದ ಪುಡಿಯೊಂದಿಗೆ? ಅದರ ಮಜವೇ ಬೇರೆ. ಅಜ್ಜಿ ರುಚಿ ರುಚಿಯಾದ ತಿಂಡಿ ಮಾಡಿಕೊಡುತ್ತಿದ್ದರು. ದಿನಗಳು ಹೋಗುತ್ತಿದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ರಜೆ ಮುಗಿದು ಶಾಲೆಗೆ ಹೋಗಬೇಕೆಂದರೇ ಬೇಜಾರಾಗುತಿತ್ತು.

ಪ್ರತಿದಿನ ಶಾಲೆ ಮುಗಿಸಿ ಮನೆಗೆ ಬಂದಾಗ ನಿಮ್ಮ ಹಾಗೆ ನಮಗೆ ನೋಡಲು ಪೊಗೊ ಆಗಲಿ,wwf ಆಗಲಿ ಇರಲಿಲ್ಲ. ಅಸಲಿಗೆ ಟಿ ವಿ ಡಬ್ಬಗಳೇ ಇರಲಿಲ್ಲ! ನಾವು ಆಡುತ್ತಿದ್ದ ಆಟಗಳೇ ಬೇರೆ ಅವುಗಳ ಮಜವೇ ಬೇರೆ. ಬುಗುರಿ ಆಟ, ಗೋಲಿ ಆಟ, ಚಿಣ್ಣಿ ದಾಂಡು. ಎಂತೆಂಥಾ ವೆರೈಟಿ ಇತ್ತು ನಮ್ಮ ಆಟಗಳಲ್ಲಿ! ನೀವು ಬುಗುರಿ ಆಡಿದ್ದೀರಾ? ಗೋಲಿ ನೋಡಿದ್ದೀರಾ? ಹೋಗಲಿ, ಚಿನ್ನಿ ದಾಂಡು ಏನು ಗೊತ್ತಾ? ಬಿಡಿ, ಅವೆಲ್ಲಾ ಹೇಳುತ್ತಾ ಹೋದರೆ ನಿಮಗೆ ಹೋಟ್ಟೆಕಿಚ್ಚಾಗುತ್ತೆ. ನೀವೂ ನಮ್ಮ ವಯಸ್ಸಿನವರಾಗಿ. ಆಗ ನಾವು ನಮ್ಮ ನಮ್ಮ ವೃತ್ತಿಗಳಿಂದ ರಿಟೈರ್ ಆಗಿರುತ್ತೇವೆ. ನಮ್ಮ ಬಾಲ್ಯದ ದಿನಗಳ ಬಗ್ಗೆ ಪುಸ್ತಕಗಳನ್ನು ಬರೆಯುತ್ತೀವಿ ಅದನ್ನು ಓದಿದಾಗ ನಿಮಗೆಲ್ಲಾ ಅನ್ನಿಸುತ್ತೆ; ನಿಮ್ಮ ಬಾಲ್ಯ ಎಷ್ಟು ಕೃತಕವಾಗಿತ್ತು, ನಿಮ್ಮ ತಂದೆ ತಾಯಿ ನಿಮ್ಮನ್ನು ಎಷ್ಟು 'ವಂಚಿಸಿ'ದ್ದಾರೆಂದು!
ಇಲ್ಲಿ ಕ್ಲಿಕ್ ಮಾಡಿ, ಬಾಲ್ಯದ ರಸಭರಿತ ತುಣುಕ್ಕೊಂದು ಇದೆ.

ಇಂತಿ ನಿಮ್ಮ ಬಗ್ಗೆ ಮರುಕಪಡುವ

'ಪತ್ರ'ಕರ್ತ