Monday, May 22, 2006

ಸಣ್ಣ ಸಣ್ಣ ಸಾಧನೆಗಳ,ಸಂತೋಷಗಳ ಒಟ್ಟು ಮೊತ್ತವೇ ಜೀವನ,ಅಲ್ವಾ?

ಆತ್ಮೀಯ ಹೇಮಾ,
ಮನೆಯಲ್ಲಿ ಇಂಟರ್‍ನೆಟ್ ಸೌಲಭ್ಯದ ಒಂದು ಪ್ರಯೋಜನ ಅಂದರೆ ಯಾವಾಗ ಬೇಕು ಆಗ ಬಳಸಿಕೊಳ್ಳಬಹುದು.ಹೀಗಾಗಿ ನಿನಗೆ ನಾನು ಅಷ್ಟು ಮೇಲ್ ಕಳುಹಿಸಲು ಸಾಧ್ಯವಾಗಿದೆ.ಈ ಹಿಂದೆ ನಾನು ಬಹಳ ಈ-ಮೇಲ್ ಗೆಳೆಯ-ಗೆಳತಿಯರನ್ನು ಕಳೆದು ಕೊಂಡಿದ್ದೇನೆ.ಆಗ ನೆಟ್ ಗಾಗಿ ಹೊರಗಡೆ ಹೋಗ ಬೇಕಾಗಿತ್ತು. ನಿಯಮಿತವಾಗಿ ಸಂಪರ್ಕದಲ್ಲಿರಲು ಸಾಧ್ಯ ಆಗುತ್ತಿರಲಿಲ್ಲ. ಹಾಗಾಗಿ ಆ ಗೆಳೆತನಗಳು ಅಲ್ಲಲ್ಲಿ ಕಳಚಿಕೊಂಡವು.

ನಿನಗೆ ಈ-ಮೇಲ್ ಮಾಡಿ ಬಹಳ ದಿನಗಳಾದವು.ಕಾರಣ ವ್ಯಸ್ತ ದಿನಚರಿ.ನನ್ನ ಒಂದು ಬಲಹೀನತೆ ಎಂದರೆ ಎಲ್ಲವನ್ನು ಗುಡ್ಡೆ ಹಾಕಿಕೊಂಡು ಕೂರುವುದು.ಎಲ್ಲಾವನ್ನು ಮಾಡಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ.ಕೊನೆಗೆ ನೋಡಿದರೆ ಯವುದೂ ಮುಗಿದಿರುವುದಿಲ್ಲ.ಎಲ್ಲಾ 'ತಿರುಪತಿ ಕ್ಷೌರ'! ಉದಾಹರಣೆಗೆ, ಮಿಸಲಾತಿ ವಿವಾದ ಬಗ್ಗೆ ಓದಲು 'ಇಂಡಿಯ ಟುಡೆ' ಮತ್ತು 'ಫ್ರಂಟ್ ಲೈನ್' ತಂದಿಟ್ಟುಕೊಂಡಿದ್ದೇನೆ.ಮೊದಲನೆಯದು ತಂದು ಒಂದು ವಾರದ ಮೇಲಾಯಿತು ಮತ್ತೊಂದನ್ನು ತಂದು ಹದಿನೈದು ದಿನಗಳ ಮೇಲಾಯಿತು. ಎರಡನ್ನೂ ಪೂರ್ತಿ ಓದಿಲ್ಲ! 'ಔಟ್ ಲುಕ್ ಬಿಸಿನೆಸ್' ಎಂಬ ಹೊಸ ನಿಯತಕಲಿಕ ಬಂದಿದೆಯಲ್ಲ ಹೇಗಿದೆ ನೋಡೋಣ ಎಂದು ಒಂದು ಪ್ರತಿ ತಂದ್ದಿಟ್ಟುಕೊಂಡು ಒಂದು ವಾರ ಆಯಿತು, ಅದರ ಓದು ಎರಡು ಮೂರು ಪುಟ್ದ ಆಚೆ ದಾಟಿಲ್ಲ! ಈಗಾಗಲೆ ನಿಯಮಿತವಾಗಿ ತರಿಸುವ ಎರಡು ಪತ್ರಿಕೆಗಳ ಮೂರು ವಾರದ ಸಂಚಿಕೆಗಳು ಹಾಗೆಯೇ ಬಿದ್ದಿವೆ. ಈ ಮಧ್ಯೆ ಕನ್ನಡದಲ್ಲಿ ಇನ್ನೊಂದು ಬ್ಲಾಗ್ ಪ್ರಾರಂಭಿಸಿದ್ದೇನೆ. ಹೆಸರು 'ಓಲೆಗರಿ'. ವಾರಕ್ಕೊಂದು ಪತ್ರ ಬರೆದು ಅಲ್ಲಿ ಪ್ರಕಟಿಸುವ ಉದ್ದೇಶ ಇದೆ. ಸಮಯವನ್ನು ಎಲ್ಲಿಂದ ತರಲಿ(ಕದ್ದಾದರೂ ಸಹ)?

ನನ್ನ ಕನ್ನಡ ಬ್ಲಾಗ್ ಓದಲು ಆಗಲಿಲ್ಲ ಎಂದು ಹೇಳಿದಿಯೆಲ್ಲಾ, ಅದಕ್ಕೆ ಸಂಬಂದಪಟ್ಟ ನಿನಗೆ ಸಹಾಯ ಆಗುವಂತಹ ಲಿಂಕ್ ನೀಡಿದ್ದೇನೆ ಪ್ರಯತ್ನಿಸು.ನಾನು ಕನ್ನಡದಲ್ಲಿ ಬ್ಲಾಗಿಂಗ್ ಮತ್ತು ಈ-ಮೇಲ್ ಮಾಡಲು ಸಾಧ್ಯವಾದದ್ದು 'ಬರಹ' ತಂತ್ರಾಂಶದಿಂದ.
'ಬರಹ' ದ   ಬಗ್ಗೆ ಗೊತ್ತಾ?
ಬ್ಲಾಗ್ ಬಗ್ಗೆ ಗೊತ್ತಿಲ್ಲ ಎಂದು ಹಿಂದೊಮ್ಮೆ ತಿಳಿಸಿದ್ದೆ. ಕೆಲವು ವಾರಗಳ ಹಿಂದೆ 'ಸುಧಾ' ಸಾಪ್ತಾಹಿಕದಲ್ಲಿ ಬ್ಲಾಗ್ ಗಳ ಬಗ್ಗೆ ಮುಖಪುಟ ಲೇಖನ ಪ್ರಕಟವಾಗಿದೆ(೪ ಮೇ,೨೦೦೬). ಹುಡುಕಿ ಓದು.

ಕನ್ನಡದಲ್ಲಿ ಬ್ಲಾಗ್ ಗಳಿರುವುದು ನೋಡಿ ಕನ್ನಡದಲ್ಲಿ ಬ್ಲಾಗ್ ಮಾಡುವ ಆಸೆ ಆಯಿತು,ಅಚ್ಚ ಕನ್ನಡಿಗ ನೋಡು. ಕನ್ನಡವನ್ನು ಇಂಟರ್ ನೆಟ್ ನಲ್ಲಿ ಬಳಸುವ ಬಗ್ಗೆ ಗೊತ್ತಿರಲಿಲ್ಲ.ಅಲ್ಲಿ ಇಲ್ಲಿ ಹುಡುಕಾಡಿ ಕೊನೆಗೂ ಕಲಿತುಬಿಟ್ಟೆ. ಆ ದಿನ ಎಷ್ತು ಖುಶಿ ಆಯಿತು ಗೊತ್ತಾ? ಇಂತಹ ಸಣ್ಣ ಸಣ್ಣ ಸಾಧನೆಗಳ ಒಟ್ಟು ಮೊತ್ತವೇ ಜೀವನ ಅಲ್ವಾ?

ಅಫ್ರಾ ಅಜ್ಜಿ ಮನೆಗೆ ಹೋಗಿದ್ದಾಳೆ.೨೨ ದಿನಗಳಾಯಿತು.ಅವರ ಅಜ್ಜಿಗೆ ಬೇಸಿಗೆ ರಜೆ.ಅದಕ್ಕಾಗಿ ಕರೆದುಕೊಂಡಿದ್ದಾರೆ.ಅವಳಿಲ್ಲದೆ ಇಲ್ಲಿ ಮನೆ ವಾತವರಣ ನೀರಸವಾಗಿದೆ.ಇನ್ನೊದು ವಾರದಲ್ಲಿ ಬರುತ್ತಾಳೆ.ನಾನು ಆಗಾಗ ಎರಡು ದಿನಕ್ಕೊಮ್ಮೆ ಹೋಗಿ ಮಾತಾಡಿಸಿ ಬರುತ್ತೇನೆ.ಅವಳ ಅಮ್ಮನ ತವರು ಮನೆ ಇರುವುದು ಇದೇ ಊರಲ್ಲಿ.ಇನ್ನೊಂದು ಮುಖ್ಯ ವಿಷಯ ಅಂದರೆ ಮದುವೆಗಿಂತ ಮುಂಚೆ ನಾನು ಮತ್ತು ನನ್ನ 'ಹುಡುಗಿ' ಒಂದೇ ಬೀದಿಯಲ್ಲಿ ಇದ್ದವರು!ಮದುವೆ ನಂತರ ಈಗ ಬೇರೆ ಬೇರೆ ಬಡಾವಣೆ.ಹಲೋ! ನೀನೂ ಎಲ್ಲರ ಹಾಗೆ ನಮ್ಮದು ಪ್ರೇಮ ವಿವಾಹ ಅಂದುಕೊಳ್ಳಬೇಡ!ನಮ್ಮದು ಅಪ್ಪಟ ಅರೇಂಜ್ದ್ ಮದುವೆ. ಇನ್ನೊಂದು 'ವಿಚಿತ್ರ'(ಆದರೂ ಸತ್ಯ)ಸಂಗತಿ;ನಾನು ಅವಳನ್ನು ಅದುವರೆಗೂ ನೊಡಿದ್ದು ಒಂದೆರಡು ಬಾರಿ ಅಷ್ಟೆ!ಅದೂ ನಮ್ಮ ಮನೆ ಮುಂದೆ ಹಾದು ಹೊಗುವಾಗ ಒಂದೆರಡು ಕ್ಷಣಗಳಿಗೆ ಮಾತ್ರ!

ಮಾರಾಯಿತಿ!ನಾನು ಬೇರೆಯವರ ದೃಷ್ಟಿಯಲ್ಲಿ 'ಬಹಳ ಒಳ್ಳೆ ಹುಡುಗ'.ಯಾವಾಗ ನೋಡಿದರೂ ಕೈಯಲ್ಲಿ ಪುಸ್ತಕ ಅಥವ ಪತ್ರಿಕೆ ಹಿಡಿದುಕೊಂಡಿರುವವನು!ಮಜಾ ಗೊತ್ತಾ? ಒಮ್ಮೆ ನನ್ನವಳ ಚಿಕ್ಕಮ್ಮನ ಮನೆಯಲ್ಲಿ ಊಟಕ್ಕೆ ಕರೆದಿದ್ದರು.ಅವರ ಮನೆಯಲ್ಲಿ ಪೇಪರ್ ತರಿಸುವುದಿಲ್ಲ.ಅಂದು ನಾನು ಹೋದ ದಿನ ನನಗಾಗಿ ಅಂದಿನ ದಿನಪತ್ರಿಕೆಯೊಂದನ್ನು ತರಿಸಿಟ್ಟಿದ್ದರು. ನನ್ನವಳು ಈ ವಿಷಯ ತಿಳಿಸಿದಾಗ ಮುಜುಗರ ಪಟ್ಟೆ.ಇನ್ನೆಂದೂ ಬೇರೆಯವರ ಮನೆಗೆ ಹೋದಾಗ ಪತ್ರಿಕೆ ಅಥವ ಪುಸ್ತಕ ಮುಟ್ಟಬಾರದು, ನನ್ನದು ಅತಿಯಾಯಿತು ಎಂದು ಶಪಥ ಮಾಡಿಕೊಂಡೆ.ಆದರೆ ಹುಟ್ಟುಗುಣ ಸುಟ್ಟರೂ  ಬಿಡಕಾಗುತ್ತದೆಯೇ?

ನನ್ನ ಪುರಾಣ ಸಾಕು, ನಿನ್ನದೇನು ಹೇಳು?

ಹೇಗಿತ್ತು 'ರೋಮಾಂಚನ'? ಅದೇ ಮಿಸ್ಟರ್ ರೋಮಾಂಚ್ ನನ್ನು ಕಾಲೇಜ್ ಫೆಸ್ಟ್ಗೆ ಆಮಂತ್ರಿಸಿದ್ದೆಯಲ್ಲಾ? ಪಾಪ ಕಣೇ. ಅವನನ್ನು ಬಹಳ ಗೋಳಾಡಿಸ ಬೇಡ. ಆಮೇಲೆ ನಿನ್ನ 'ಚಿಂತೆ'ಯಲ್ಲಿ ಸೊರಗಿ ಬಿಟ್ಟಾನು. ಈ ಕಪಿ ಚೇಷ್ಟೆ ಎಲ್ಲಾ ಬಿಟ್ಟು ಓದಿನ ಕಡೆ, ಭವಿಷ್ಯದ ಕಡೆ ಗಮನ ಕೊಡು ಮರೀ.

ಛೇ,ಮರೆತೇ ಬಿಟ್ಟೆ. Congratulations ಕಣೇ.ನೀನು distinctionನಲ್ಲಿ ಪಾಸ್ ಆಗಿದಕ್ಕೆ! ಅದ್ಯಾವಾಗ ಓದಿದೆ? ಯಾವಾಗ್ ನೋಡಿದರೂ 'ಸಂಸ್ಕಾರ' ಓದಿದೆ, ಇಡೀ ದಿನ ನಿದ್ದೆ ಮಾಡಿ ಕಳೆದೆ ಎಂದೆಲ್ಲಾ ಹೇಳುತ್ತಿದ್ದೇ? ಒಳ್ಳೆಯದಾಗಲಿ.

ನಿನ್ನ ಕಾಲೇಜು ಇನ್ನೂ shift ಆಗಿಲ್ಲವಾ? ನಿಮ್ಮ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ಈ-ಮೆಲ್ ಮಾಡು.

ಇಂತಿ ನಿನ್ನ
ಈ-ಗೆಳೆಯ(e-friend)
                            

3 Comments:

Blogger Sanath said...

ನಮಸ್ಕಾರ
"ಸಣ್ಣ ಸಣ್ಣ ಸಾಧನೆಗಳ,ಸಂತೋಷಗಳ ಒಟ್ಟು ಮೊತ್ತವೇ ಜೀವನ,ಅಲ್ವಾ?" ಎನ್ನುವುದು ಒಂದು ವಾಕ್ಯ ನೋಡಿ ಬಹಳ ಅನಂದ ವಾಯಿತು.ಜೀವನದ ಸಾರವೆಲ್ಲ ಒಂದು ವಾಕ್ಯ ದಲ್ಲಿ ಹೇಳಿದಂತಿದೆ...ಧನ್ಯವಾದಗಳು ನನ್ನ ಕೋಶಕ್ಕೆ ಹೊಸ ಒಂದು ವಾಕ್ಯ ನೀಡಿದಕ್ಕೆ..ಈ-ಮಿತ್ರತ್ವ ಪ್ರಾರಂಭಿಸೋಣ ವೇ

8:43 PM  
Anonymous Anonymous said...

ದಿನಕ್ಕೊಬ್ಬೊಬ್ಬರಿಗೆ ಪತ್ರ ಬರೆಯುತ್ತಿದ್ದೀರಾ? ನಿಮ್ಮ ಬರಹ ಬಹಳ ಇಂಟರೆಸ್ಟಿಂಗ್ ಆಗಿದೆ. ಮುಂದುವರೆಸಿ. ಪ್ರತಿ ಬರಹವನ್ನೂ ನಾನು ಓದುವೆನು.

1:13 PM  
Blogger ತಲೆಹರಟೆ said...

ಸನತ್,
ನಿಮ್ಮ ಈ-ಮೇಲ್ ವಿಳಾಸ ಕೊಡಬಲ್ಲಿರಾ?
ಅನಾಮಿಕ,
ಧನ್ಯವಾದಗಳು, ಮೆಚ್ಚುಗೆಯ ಮಾತುಗಳಿಗೆ ಹಾಗು ಪ್ರೋತ್ಸಾಹಕ್ಕೆ.ನಿಮ್ಮ ಹೆಸರು ನಮೂದಿಸಿದ್ದರೆ ಚೆನ್ನಾಗಿರುತಿತ್ತು. ನಿಮಗಿಷ್ಟ ಇಲ್ಲ ಅಂದರೆ ಬೇಡ; ಅನಾಮಿಕರಾಗಿಯೆ ಇರಿ.

8:48 AM  

Post a Comment

<< Home