Sunday, June 11, 2006

ಅದೆಲ್ಲಾ ಹೇಳಿದರೆ ನಿಮಗೆ ಹೊಟ್ಟೆಕಿಚ್ಚಾಗುತ್ತದೆ!!!!

ಮೈ ಡಿಯರ್ ಮಕ್ಕಳೆ,
ಹೇಗಿದ್ದೀರಾ? ಶಾಲೆ ಪ್ರಾರಂಭ ಆಗಿ ಒಂದು ವಾರದ ಮೇಲಾಯಿತು ಅಲ್ವಾ?
ಹೇಗನ್ನಿಸುತ್ತಿದೆ;ರಜೆ ಮುಗಿಸಿ ಶಾಲೆಗೆ ಹೋಗುವಾಗ?
ಹೊಸ ಯೂನಿಫಾರಮ್,ಹೊಸ-ಹೊಸ ಪುಸ್ತಕ,ಹೊಸ ಕ್ಲಾಸ್ ಟೀಚರ್........ಚೆನ್ನಾಗಿರಬೇಕಲ್ಲಾ?

ನಾವು ನಿಮ್ಮಷ್ಟರಿದ್ದಾಗ ಇದೇನು ಇರಲಿಲ್ಲ! ಯೂನಿಫಾರಮ್ ನಾವು ಹಾಕಿಕೊಂಡದ್ದು ಎಂಟನೆ ಕ್ಲಾಸಿಗೆ ಬಂದಾಗ! ನಾಲ್ಕನೇ ಕ್ಲಾಸಿನವರಗೆ ನಮಗೆ ನೋಟ್ ಬುಕ್ಕೇ ಇರಲಿಲ್ಲ. ಎಲ್ಲಾ ಸ್ಲೇಟ್ ನಲ್ಲೇ ಮುಗಿಯುತಿತ್ತು. ಇದ್ದರೆ ಒಂದೇ ಒಂದು ನೋಟ್ ಬುಕ್ ಇರುತಿತ್ತು. ಆದರೆ ಅದನ್ನು ಪೆನ್ನಿನಲ್ಲಿ ಬರೆಯುತ್ತಿರಲಿಲ್ಲ, ಪೆನ್ಸಿಲಿನಲ್ಲಿ. ಅಂದಹಾಗೆ ಸ್ಲೇಟು ಅಂದರೆ ಏನು ಗೊತ್ತಾ? ಬಳಪ ಎಂದಾದರು ಮುಟ್ಟಿದ್ದೀರಾ? ಛೇ! ನಿಮ್ಮಲ್ಲಿ ಬಹಳ ಮಕ್ಕಳು ಇವುಗಳನ್ನು ನೋಡಿಯೇ ಇಲ್ಲವೇನೊ?

ನೀವೆಲ್ಲಾ ಎಷ್ಟೆಷ್ಟು ಪುಸ್ತಕಗಳನ್ನು ಹೊತ್ತಿಕೊಂಡು ಹೋಗುತ್ತೀರಾ,ಅಬ್ಬಬ್ಬಾ ! ನಾವಾ? ಅಯ್ಯೋ, ನಮಗೆ ಇದ್ದದ್ದು ಒಂದೆರಡು ಪಾಠದ ಪುಸ್ತಕ(ನೀವು ಅದನ್ನು text book ಅನ್ನುತ್ತೀರಿ) ಜೊತೆಗೆ ಸ್ಲೇಟು ಬಳಪ. ಇನ್ನೊಂದು ವಿಷಯ ಗೊತ್ತಾ? ನಮಗೆ ಹೋಮ್ ವರ್ಕ್ ಇರಲೇ ಇಲ್ಲ. ಶಾಲೆಯಲ್ಲಿ ಬರೆದಿದ್ದು ಅಲ್ಲೆ ಅಳಿಸಿ ಬರುತ್ತಿದ್ದೆವು. ಮನೆಗೆ ಬಂದಾಗ ಆಟ ಊಟ ಅಷ್ಟೆ!

ನಿಮ್ಮ ವಯಸ್ಸಿನಲ್ಲಿ ನಮಗೆ 'ಕಂಪ್ಯೂಟರ್' ಪದದ ಪರಿಚಯವೇ ಇರಲಿಲ್ಲ. ನಮ್ಮ ಟೀಚರ್ ಗಳಿಗೂ ಅದರ ಪರಿಚಯ ಇರಲಿಲ್ಲ ಅನ್ನಿಸುತ್ತೆ. ನಾವು ಕಂಪ್ಯೂಟರ್ ನೋಡಿದ್ದು ಈಗಲೇ. ಆದರೆ ನೀವೆಲ್ಲ ಕಂಪ್ಯೂಟರ್ ಯುಗದ ಮಕ್ಕಳು. ನಿಮಗೆ ಏನೆಲ್ಲಾ ಸೌಲಭ್ಯ ಇದೆ! ಆಡಲು ಕಂಪ್ಯೂಟರ್ ಗೇಮ್ಸ್,ವೀಡಿಯೋ ಗೇಮ್ಸ್, ನೋಡಲು ಕಾರ್ಟೂನ್ ಶೊ, ಪೋಗೊ,wwf, ತಿನ್ನಲು ಕೆಲಾಗ್ಸ್, ಮ್ಯಾಗಿ ನೂಡಲ್ಸ್, ಡೈರಿ ಮಿಲ್ಕ್........ಅಬ್ಬಬ್ಬಾ, ಏನೆಲ್ಲಾ ಇದೆ 'ನಿಮಗೋಸ್ಕರ'? ಆದರೆ ಪ್ರಾಮಾಣಿಕವಾಗಿ ಹೇಳಲಾ? ಇಷ್ಟೆಲ್ಲಾ ಇದ್ದರು ನೀವು ದುರಾದೃಷ್ಟವಂತರು! ನಾವೆ ನಿಜವಾದ ಅದೃಷ್ಟವಂತರು. ನಿಮಗೆ ಇದು ಅರ್ಥ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ತಂದೆ-ತಾಯಿಗೆ ಅರ್ಥ ಆಗುತ್ತೆ, ಕೇಳಿ ನೋಡಿ.

ಮೊನ್ನೆ ರಜೆಯಲ್ಲಿ ನೀವು ಅಜ್ಜಿ ಊರಿಗೆ ಹೋಗಿದ್ರಾ? ಹೋಗಿ ಅಲ್ಲಿ ಏನ್ ಮಾಡಿದ್ರಿ? ಅಜ್ಜಿ ಯಾವ ಕತೆ ಹೇಳಿದರು ನಿಮಗೆ? ಅಲ್ಲಿ ಕೆರೆ ಹತ್ತಿರ ಹೋಗಿದ್ರಾ? ಅಜ್ಜನ ಜತೆ ಮಾವಿನ ತೋಪಿಗೆ ಹೋಗಿ ಮಾವಿನ ಹಣ್ಣು ತಿಂದು ಬಂದಿರಾ? ಅಲ್ಲಿ ಮರಕ್ಕೆ ಜೋಕಾಲಿ ಕಟ್ಟಿ ಜೀಕಿದ್ರಾ? ಇದ್ಯಾವುದು ಮಾಡಿಲ್ಲ ಅಲ್ವಾ? ನೀವೆಲ್ಲ ಏನೇನು ಮಾಡಿದ್ರಿ ಗೊತ್ತು. ಒಂದಿಷ್ಟು ಪೊಗೊ ನೋಡಿದ್ರಿ, wwf 'enjoy' ಮಾಡಿದ್ರಿ, fanatcy parkಗೆ ಹೋಗಿರಬಹುದು, harry potter ಚಿತ್ರ ನೋಡಿರಬಹುದು. ಅಷ್ಟೆ ಅಲ್ವಾ? ನಿಮ್ಮ ವಯಸ್ಸಿನಲ್ಲಿ ನಾವು ಇಂತಹ ರಜೆಯಲ್ಲಿ ಎಷ್ಟು ಮಜಾ ಮಾಡುತ್ತಿದ್ದೆವು! ರಜೆ ಬಂದರೆ ಸಾಕು, ಅಜ್ಜಿ ಊರಿಗೆ ರವಾನೆ. ಅಲ್ಲಿ ಅಜ್ಜಿಯಿಂದ ದಿನಕ್ಕೊಂದು ಕತೆ. ಬೆಳಿಗ್ಗೆ ಹೊತ್ತು ಅಜ್ಜನ ಜೊತೆ ತೋಟದಲ್ಲಿ ಸುತ್ತಾಟ. ಕೆರೆಗೂ ಹೋಗುತಿತ್ತು ನಮ್ಮ ಸವಾರಿ. ನೀವು ಎಂದಾದರು ಮಾವಿನ ಕಾಯಿ ತಿಂದಿದ್ದೀರಾ, ಉಪ್ಪು ಖಾರದ ಪುಡಿಯೊಂದಿಗೆ? ಅದರ ಮಜವೇ ಬೇರೆ. ಅಜ್ಜಿ ರುಚಿ ರುಚಿಯಾದ ತಿಂಡಿ ಮಾಡಿಕೊಡುತ್ತಿದ್ದರು. ದಿನಗಳು ಹೋಗುತ್ತಿದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ರಜೆ ಮುಗಿದು ಶಾಲೆಗೆ ಹೋಗಬೇಕೆಂದರೇ ಬೇಜಾರಾಗುತಿತ್ತು.

ಪ್ರತಿದಿನ ಶಾಲೆ ಮುಗಿಸಿ ಮನೆಗೆ ಬಂದಾಗ ನಿಮ್ಮ ಹಾಗೆ ನಮಗೆ ನೋಡಲು ಪೊಗೊ ಆಗಲಿ,wwf ಆಗಲಿ ಇರಲಿಲ್ಲ. ಅಸಲಿಗೆ ಟಿ ವಿ ಡಬ್ಬಗಳೇ ಇರಲಿಲ್ಲ! ನಾವು ಆಡುತ್ತಿದ್ದ ಆಟಗಳೇ ಬೇರೆ ಅವುಗಳ ಮಜವೇ ಬೇರೆ. ಬುಗುರಿ ಆಟ, ಗೋಲಿ ಆಟ, ಚಿಣ್ಣಿ ದಾಂಡು. ಎಂತೆಂಥಾ ವೆರೈಟಿ ಇತ್ತು ನಮ್ಮ ಆಟಗಳಲ್ಲಿ! ನೀವು ಬುಗುರಿ ಆಡಿದ್ದೀರಾ? ಗೋಲಿ ನೋಡಿದ್ದೀರಾ? ಹೋಗಲಿ, ಚಿನ್ನಿ ದಾಂಡು ಏನು ಗೊತ್ತಾ? ಬಿಡಿ, ಅವೆಲ್ಲಾ ಹೇಳುತ್ತಾ ಹೋದರೆ ನಿಮಗೆ ಹೋಟ್ಟೆಕಿಚ್ಚಾಗುತ್ತೆ. ನೀವೂ ನಮ್ಮ ವಯಸ್ಸಿನವರಾಗಿ. ಆಗ ನಾವು ನಮ್ಮ ನಮ್ಮ ವೃತ್ತಿಗಳಿಂದ ರಿಟೈರ್ ಆಗಿರುತ್ತೇವೆ. ನಮ್ಮ ಬಾಲ್ಯದ ದಿನಗಳ ಬಗ್ಗೆ ಪುಸ್ತಕಗಳನ್ನು ಬರೆಯುತ್ತೀವಿ ಅದನ್ನು ಓದಿದಾಗ ನಿಮಗೆಲ್ಲಾ ಅನ್ನಿಸುತ್ತೆ; ನಿಮ್ಮ ಬಾಲ್ಯ ಎಷ್ಟು ಕೃತಕವಾಗಿತ್ತು, ನಿಮ್ಮ ತಂದೆ ತಾಯಿ ನಿಮ್ಮನ್ನು ಎಷ್ಟು 'ವಂಚಿಸಿ'ದ್ದಾರೆಂದು!
ಇಲ್ಲಿ ಕ್ಲಿಕ್ ಮಾಡಿ, ಬಾಲ್ಯದ ರಸಭರಿತ ತುಣುಕ್ಕೊಂದು ಇದೆ.

ಇಂತಿ ನಿಮ್ಮ ಬಗ್ಗೆ ಮರುಕಪಡುವ

'ಪತ್ರ'ಕರ್ತ

8 Comments:

Blogger Shiv said...

ಹೂಂ...ಏಲ್ಲಿ ಹೋದವು ಆ ದಿನಗಳು ?
ಬುಗುರಿ,ಗೋಲಿ,ಚಿಣ್ಣಿ ದಾಂಡು..ಏಷ್ಟು ಮಜದ ಆಟಗಳು
ಹಳ್ಳ,ಹೊಳೆ,ಗುಡ್ಡ,ಮಾವಿನಕಾಯಿ,ಹುಣಿಸೆಕಾಯಿ..ಎಲ್ಲಿವೇ ಅವು?

ಅಧುನಿಕತೆಗೆ-ಪ್ರಗತಿಯ ಹೆಸರಿನಲ್ಲಿ ನಾವು ಏನೆಲ್ಲ ಕಳೆದುಕೊಳ್ಳತ್ತಾ ಇದಿವಿ..

ದಿನಗಳು ದೂರವಿಲ್ಲ..ನೀವು ಹೇಳಿದ ವಿಷಯಗಳು ಕೇವಲ ಲೇಖನಕ್ಕೆ.ಪುಸ್ತಕಗಳಿಗೆ ಸೀಮಿತವಾಗಿವೆ..

ಅಂದಾಗೆ ನಿಮ್ಮ ನೆನಪಿನಾಂಗಳದಲ್ಲಿ ನನ್ನ ಪಾತರಗಿತ್ತಿಯನ್ನು ಕರೆತಂದಕ್ಕೆ ಧನ್ಯವಾದಗಳು..

8:32 AM  
Blogger bhadra said...

ಪತ್ರದ ಮೂಲಕ ನೆನಪುಗಳ ಮೆಲುಕನ್ನು ಬಹಳ ಚೆನ್ನಾಗಿ ಮೂಡಿಸಿದ್ದೀರಿ.
ನಾನು ಬಾಲ್ಯದಲ್ಲಿ ಸ್ವತಂತ್ರವಾಗಿದ್ದಷ್ಟು ನನ್ನ ಮಕ್ಕಳು ಸ್ವತಂತ್ರವಾಗಿಲ್ಲ. ನೀವು ತಿಳಿಸಿದಂತೆ, ಯೂನಿಫಾರಂ, ಶೂಸ್, ಮಣಗಟ್ಟಲೆ ಪುಸ್ತಕಗಳನ್ನು ಹೊತ್ತ ಗೂನಾಗುತ್ತಿರುವ ಬೆನ್ನು, ಕಾರ್ಟೂನ್ ಚಾನೆಲ್‍ಗಳು, ಬೇಬ್ಲೇಡ್ ಇತ್ಯಾದಿಗಳ ಮುಂದೆ ಬುಗುರಿ, ಚಿಣ್ಣಿದಾಂಡು, ಮರಕೋತಿ, ಸೀಬೇಕಾಯಿ, ಹುಣಸೇಕಾಯಿ, ನೆಲ್ಲಿಕಾಯಿ ಇತ್ಯಾದಿಗಳು ಮಾಯವಾಗಿವೆ.

ಗತಾನುಗತಿಕೋ ಕಾಲ: ಎಂದಷ್ಟೇ ಹೇಳಬಹುದು. ಬಾಲ್ಯಕ್ಕೆ ಎಳೆದೊಯ್ದು ಮನ ಮುದಗೊಳಿಸಿದ್ದಕ್ಕೆ ಧನ್ಯವಾದಗಳು.

12:36 PM  
Blogger Anveshi said...

ನೀವ್ಯಾಕೆ ನಮ್ಮಂಥ ಮಕ್ಕಳಿಗೆ ಈ ರೀತಿ ಟಾಂಟ್ ಕೊಟ್ಟಿದ್ದು?
ನಮಗೀಗ ಚಿಣ್ಣಿ ದಾಂಡು, ಬುಗರಿ, ಗೋಲಿ ಆಡಲು ಜಾಗವಾದ್ರೂ ಎಲ್ಲಿದೆ?

ನಾನು ನೆಟ್ಟಿಡೀ ನಿಮ್ಮನ್ನು ಹುಡುಕಿದ್ರೆ ನೀವು ಇಲ್ಲಿ ತಲೆಹರಟೆ ಮಾಡ್ತಿದೀರಾ?

1:19 PM  
Blogger ತಲೆಹರಟೆ said...

ಮಾವಿನಯನಸ ಸಾರ್,
ನನ್ನ ಈ ಬ್ಲಾಗ್ ನಿವೇಶನ(site)ದಲ್ಲಿ ನಿಮ್ಮ ಭೇಟಿಯ ಗುರುತುಗಳನ್ನು ನೋಡಿ ಸಂತೋಷವಾಯಿತು. ಧನ್ಯವಾದಗಳು.

ಮಿ.ಅಸತ್ಯಾನ್ವೇಷಿ,
ನಾನಿಲ್ಲಿ 'ತಲೆಹರಟೆ' ಮಾಡುತ್ತಿದ್ದೀನಿ ಎಂಬ 'ಅಸತ್ಯ'ವನ್ನು ಅನ್ವೇಶೀಸಿದಕ್ಕೆ ಧನ್ಯವಾದಗಳು.

2:28 PM  
Anonymous Anonymous said...

ಏನೋ ನಮ್ಮಷ್ಟಕ್ಕೆ ನಾವು ಇರೋಣ ಅಂತಿದ್ದರೆ, ನೀವು ನಮ್ಮ ಬಾಲ್ಯದ ನೆನಪುಗಳನ್ನು ಕೆದಕಿ ನಮ್ಮನ್ನು ಅಶಾಂತರನ್ನಾಗೆ ಮಾಡಿದ್ದೀರ.... ಆದ್ರೂಒ ಅಜ್ಜಿ ಕಥೆ, ದಾರಿ ಬದಿ ಇರೋ ಮರದಿಂದ ಮಾವನ್ನು ಕದ್ದು ತಿನ್ನೊ ಸಾಹಸ..... ಲಗೋರಿ, ಕಬ್ಬಡ್ದಿ ಆಟದ ಮಜಾ ಈಗಿನ ಮಕ್ಕಳಿಗೆ ಇಲ್ಲ ಅನ್ನಿ

1:56 AM  
Blogger Shiv said...

ತುಂಬಾ ದಿನ ಆಯಿತು..ಓಲೆಗರಿಯಿಂದ ಯಾವುದೇ ಲೇಖನ ಹೊರಬಂದಿಲ್ಲ..ಬೇಗ ಬರೆಯಿರಿ..

9:35 AM  
Blogger ತಲೆಹರಟೆ said...

ಮುರಳೀ,
ಶಾಂತರಾಗಿ. ನಮ್ಮ ಮಕ್ಕಳಿಗೆ ಮಕ್ಕಳಂತಿರಲು ಅನುಕೂಲ ಮಾಡಿಕೊಡುವ ಬಗ್ಗೆ ಯೋಚಿಸೋಣ.
ನಿಮ್ಮ ಭೇಟಿಗೆ ಧನ್ಯವಾದಗಳು.

2:30 PM  
Blogger Sanath said...

ಒಲೆಗರಿ ಯವರೆ , ತಮ್ಮ ಈ ಪತ್ರ ಓದಿ ನನ್ನ ಬಾಲ್ಯದ ದಿನಗಳು ನೆನಪಾದವು...ಆ ನೆನಪುಗಳು ಆಮೂಲ್ಯ....ಮೊನ್ನೆ ನಮ್ಮ ಆಫೀಸಿ ನಲ್ಲಿ Country games ಅಂತ ಟಯರ್ ರೇಸ್,ಲಗೋರಿ ಮುಂತಾದ ಆಟಗಳಿದ್ದವು. ಅವುಗಳನ್ನು ಆಡುವಾಗ ಮನಸಿಗೆ ಎನೋ ಸಂತೋಷ...

5:56 PM  

Post a Comment

<< Home