Sunday, July 16, 2006

Talk time ಬದಲು ಬರೀ time ಸಿಕ್ಕಿದ್ದಿದ್ದರೆ....

ಪ್ರಿಯ ಶಿವ್,
ಹೇಗಿದ್ದೀರಾ? ನೀವಿರುವ ಪ್ರಪಂಚದ ಆ ಭಾಗದಲ್ಲಿ ಹೆಗಿದೆ ಜೀವನ?

ಇಲ್ಲಿ ಬಹಳ ದಿನಗಳಿಂದ ಸುರಿಯುತಿದ್ದ ಮಳೆ ಒಂದು ವಾರದಿಂದ ನಿಂತಿದೆ. ಹೇಮಾವತಿ ಡ್ಯಾಮ್ನಲ್ಲಿ ಗರಿಷ್ಟ ಮಟ್ಟಕ್ಕೆ ನೀರು ಬಂದಿದೆ. ಮುಂಗಾರಿನಲ್ಲೇ ಜಲಾಶಯ ತುಂಬಿರುವುದು ಇದು ಎರಡನೆ ಬಾರಿಯಂತೆ. ಹನ್ನೆರಡು ವರ್ಷಗಳ ನಂತರ ಕಳೆದ ವರ್ಷ ಮೊದಲಬಾರಿಗೆ ಜಲಾಶಯದ ಎಲ್ಲಾ ಒಂಬತ್ತು ಬಾಗಿಲುಗಳ ಮೂಲಕ ನಿರನ್ನು ಹೊರಬಿಡಲಾಗಿತ್ತು. ಆಗ ನೀರಿನ ಆ ಭೋರ್ಗರೆತ ರುದ್ರರಮಣೀಯವಾಗಿತ್ತು. ಇಲ್ಲಿಯ ಸುತ್ತಮುತ್ತಿನ ಜನರ ಕಣ್ಣಿಗೆ ಅದೊಂದು ಹಬ್ಬ. ಈ ಬಾರಿಯು ಎಲ್ಲಾ ಬಾಗಿಲುಗಳ ಮೂಲಕ ನೀರು ಹರಿಬಿಡುವ ಸಂಭವ ಇದೆ. ಒಂದು ವಾರದಿಂದ ಮಳೆ ನಿಂತಿರುವುದರಿಂದ ಇದು ಇನ್ನೊಂದು ವಾರ ತಡವಾಗಬಹುದು.

ಇಲ್ಲಿ ಪ್ರಮುಖ ರಸ್ತೆಗಳನ್ನೆಲ್ಲಾ ವಿಶಾಲ ಮಾಡುವ ಸಲುವಾಗಿ ಅಗೆದು ಅವಾಂತರ ಮಾಡಿಟ್ಟಿದ್ದಾರೆ. ಮಹಾಮಸ್ತಭಿಷೆಕಕ್ಕಿಂತ ಮುಂಚೆಯೇ ಪ್ರಾರಂಭಿಸಿ ಮಸ್ತಾಭಿಷೇಕ ಮುಗಿಯುವುದೊರಳಗೆ ಈ ಕಾರ್ಯ ಮುಗಿಯಬೇಕಿತ್ತು. ಆದರೆ ಕೆಲಸ ಸಾಗುತ್ತಿರುವ ವೇಗ ನೋಡಿದರೆ ಎಲ್ಲಾ ಮುಗಿಯಲು ಇನ್ನೊಂದು ಮಹಮಸ್ತಾಭಿಷೇಕ ಬರಬೇಕು! ಎಲ್ಲಾ ರಸ್ತೆಗಳು ಕೆಸರಿನ ಗದ್ದೆ ಆಗಿವೆ.

ರಸ್ತೆ ಬದಿಯಲ್ಲಿ ಎಳೆನೀರು ಮಾರುವವನ ಮುಖದಲ್ಲಿ ಹೊಟ್ಟೆಪಾಡಿನ ಚಿಂತೆ ಎದ್ದು ಕಾಣುತ್ತಿದೆ. ಶೀತ ವಾತವರಣ ಇರುವುದರಿಂದ ಎಳೆನೀರು ಮಾರಾಟವಾಗುತ್ತಿಲ್ಲ. ಬಿಸಿಲಿದ್ದರೆ ಒಂದಿಷ್ಟು ವ್ಯಾಪಾರ ಆಗುತ್ತೆ. ಮಾವಿನಹಣ್ಣು ಮಾರುತ್ತಿದ್ದಾಕೆ ಈಗ ಶೇಂಗಾ ವ್ಯಾಪಾರಕ್ಕಿಳಿದಿದ್ದಾಳೆ. ಮಾವಿನಹಣ್ಣು ಅಷ್ಟಾಗಿ ಕಾಣಸಿಗುತ್ತಿಲ್ಲ. ಏನೇ ಮಳೆ ಬಂದರೂ ದಿನಪತ್ರಿಕೆ ಎಂದಿನಂತೆಯೇ ಮನೆಗೆ ತಲುಪುತ್ತಿದೆ.

ಬಹಳ ದಿನಗಳಾದವು ಓಲೆಗರಿಯಲ್ಲಿ ಬರೆದು. ಸಮಯದ ಅಭಾವ, ಸೊಮಾರಿತನ. terrible time mismanagement ಇವೆಲ್ಲದರ ಕೊಡುಗೆ ಇದು. ವಾರಕ್ಕೊಂದು ಪತ್ರ ಪ್ರಕಟಿಸುವ ಉದ್ದೇಶದಿಂದ ಪ್ರಾರಂಭಿಸಿದ ಓಲೆಗರಿ ಇದುವರೆಗೂ ಕಂಡಿರುವುದು ಕೇವಲ ಮೂರು ಪತ್ರ. ಇದು ನಾಲ್ಕನೆಯದು.

ಸುಮಾರು ಐದು ವರ್ಷಗಳ ಹಿಂದೆ, ಬೇರೆ ಬೇರೆ ಊರುಗಳಲ್ಲಿರುವ ನನ್ನ ಮಿತ್ರರಿಗೆ ವಾರಕ್ಕೆ ಇಬ್ಬಿಬ್ಬರಿಗಾದರು ಪತ್ರ ಬರೆಯುತ್ತಿದ್ದೆ. ಅವರೂ ಸಹ ಆಗಾಗ ಪತ್ರ ಬರೆಯುತ್ತಿದ್ದರು. ಈಗ ನಾನು ಅವರಿಗೆ ಪತ್ರ ಬರೆದು ಮೂರು ವರ್ಷಗಳಾಗಿವೆ! ಅವರೂ ಸಹ ಬರೆದಿಲ್ಲ. ಅಪರೂಪಕ್ಕೊಮ್ಮೆ ಈ-ಮೇಲ್ ವಿನಿಮಯ ನಡೆಯುತ್ತೆ, ಒಂದೆರಡು 'ಹಲೋ' ಕೇಳಿಸುತ್ತೆ. ಹಾಗಂತ ನಮ್ಮ ನಡುವಿನ ಮಿತ್ರತ್ವ dilute ಆಗಿಲ್ಲ. ನಮ್ಮ ಬದುಕು ಯಾಂತ್ರಿಕ ಆಗಿಬಿಟ್ಟಿದೆ ಅಷ್ಟೆ!

ಯಾರಿಗೆ ವಿಚಾರಿಸಿದರು ಸಮಯದ ಅಭಾವ. ಯಾರಬಳಿಯೂ time ಇಲ್ಲ. ಎಲ್ಲರೂ ಬ್ಯುಸಿ! Talk time ಬದಲು ಬರೀ time ಸಿಕ್ಕಿದ್ದಿದ್ದರೆ ಎಷ್ಟು ಚೆನ್ನಾಗಿರುತಿತ್ತು!

ಬೆಂಗಳೂರಿನಂತಹ ನಗರಗಳಲ್ಲಿ ಜನ ನಡೆಯುವುದಿಲ್ಲ ಓಡುತ್ತಿರುತ್ತಾರೆ. ವಾಹನಗಳು ತಮ್ಮನ್ನು ಸುನಾಮಿ ಅಲೆಯೊಂದು ಅಟ್ಟಿಸಿಕೊಂಡು ಬರುತ್ತಿದೆ ಎಂಬಂತೆ 'ಹಾರುತ್ತಿರುತ್ತವೆ'. ಯಾರಿಗೂ ಪುರುಸೊತ್ತಿಲ್ಲ! ಪಾಪ, ಕೆಲವರಿಗಂತು ಬದುಕಲೂ ಪುರುಸೊತ್ತಿಲ್ಲ! ಜವರಾಯ ಬಂದು ಎಳುದುಕೊಂಡು ಹೋಗುತ್ತಿದ್ದಾನೆ ಅವರನ್ನು. ಇಂತಹವರಲ್ಲಿ ಶೇಕಡ 90 ರಷ್ಟು heart attack ಕೇಸ್ ಗಳೇ. ಅವರ ವಯಸ್ಸಾದರು ಎಷ್ಟಿರುತ್ತದೆ? 22, 25 ಹೆಚ್ಚೆಂದರೆ 30-35. ಮುಂಚೆ 45 ವರ್ಷದ ನಂತರವೆ ಹಾರ್ಟು attackಗೆ ಒಳಗಾಗುತ್ತಿದ್ದದ್ದು. ಈಗ? age no bar!

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ಒಂದುವಾರದಷ್ಟು ಸಮಯ ತೆಗೆದುಕೊಳ್ಳುತ್ತಿದ್ದ ಕೆಲಸ ಈಗ ತಂತ್ರಜ್ಞಾನದಿಂದಾಗಿ ಒಂದು ಗಂಟೆಯೊಳಗೇ ಮುಗಿಯುತ್ತದೆ. ಆದರೆ ಈಗ ನೋಡಿದರೆ ನಮಗಿರುವ ಕೆಲಸದ ರಾಶಿಯನ್ನು ಮುಗಿಸಲು ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸಾಕಾಗುತ್ತಿಲ್ಲ. ತಂತ್ರಜ್ಞಾನದಿಂದಾಗಿ ಉಳಿತಾಯ ಆಗಿರುವ ಸಮಯ ಎಲ್ಲಿ ಮಾಯ ಆಗುತ್ತಿದೆ? ನಾವು ನಮ್ಮ ಮೂಲ ಅವಶ್ಯಕತೆಗಳಿಗೆ(basic needs) ತಕ್ಕಂತೆ ಸಾಧನಗಳನ್ನು ರೂಪಿಸುವ ಬದಲು ಸಾಧನಗಳಿಗೆ ತಕ್ಕಂತೆ ನಮ್ಮ basic needs ಗಳನ್ನು ಹೆಚ್ಚಿಸಿಕೊಂಡಿದ್ದೇವೆ. ಅದೇ ಇಂದಿನ ದುಃಸ್ಥಿತಿಗೆ ಮೂಲ ಕಾರಣ.

ಚಕ್ರವ್ಯೂಹ ರಚಿಸಿಕೊಂಡ ನಾವೇ ಅದರೊಳಗೆ ಸಿಲುಕಿಕೊಂಡಿದ್ದೇವೆ, ಹೊರಬರಲಾಗದಷ್ಟು!

ಏನಂತೀರಿ ಶಿವ್?

ಇಂತಿ ನಿಮ್ಮ

ಈ-ಗೆಳೆಯ

4 Comments:

Blogger Shiv said...

ಪ್ರೀತಿಯ ಓಲೆಗರಿ,

ನಿಮ್ಮ ಈ ಅನಿರೀಕ್ಷಿತ ಪತ್ರವನ್ನು ನೋಡಿ ನನಗೆ ತುಂಬಾ ಖುಷಿಯಾಯಿತು !

ನಾನಿರುವ ಭಾಗದಲ್ಲಿ ಎಲ್ಲ ಸುಗಮವಾಗಿದೆ. ೨ ವಾರಗಳ ಹಿಂದೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ.ಆ ರಜೆಯಲ್ಲಿ ನಾನು ಒಂದು ಪ್ರವಾಸಕ್ಕೆ ಹೋಗಿದ್ದೆ.ಆ ಪ್ರವಾಸಗಥೆ ನನ್ನ ಬ್ಲಾಗ್ ‍ನಲ್ಲಿದೆ.

ಓ..ಹಾಗಾದರೆ ಅಲ್ಲಿ ಮಳೆಯ ಆರ್ಭಟ.ಕೆರೆ,ಆಣೆಕಟ್ಟೆ ತುಂಬಿ ತುಳುಕುತಿವೆ.ಅತ್ಯಂತ ಸಂತಸದ ವಿಷಯ.ಮಳೆ-ಬೆಳೆ ಚೆನ್ನಾಗಿದ್ದರೆ ನಾವೆಲ್ಲ ಅಲ್ವೆ?

ರಸ್ತೆ ಆಗಲೀಕರಣ..ಅದೊಂದು ಪ್ರಹಸನ ಬಿಡಿ..ಒಂದು ಇಲಾಖೆಯವರು ಗುಂಡಿ ತೆಗೆಯೋದು..ಅದನ್ನು ಅವರು ಮುಚ್ಚಿತ್ತಿದ್ದಾಗೆ ಇನ್ನೊಂದು ಇಲಾಖೆಯವರು ಇನ್ನೊಂದು ಗುಂಡಿ ತೆಗೆಯೋದು..

ನೀವು ಹೇಳಿದ ಹಾಗೆ ಉಳಿತಾಯವಾದ ಸಮಯವೆಲ್ಲ ಎಲ್ಲಿ ಸೋರಿ ಹೋಯಿತು? ನಿಜವಾಗಲೂ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾವ ?

ಎಷ್ಟೊಂದು ಒಳ್ಳೆಯ ಚಿಂತನೆ..time instead of talk time..

ಓಲೆಗರಿಗಳೇ,
ನಿಮ್ಮ ಲೇಖನಗಳು ಇನ್ಮೇಲೆ ತಪ್ಪದೆ ಬರುತ್ತವೆ ಅಂತಾ ನಿರೀಕ್ಷಿಸುತ್ತೇನೆ.ನಿರೀಕ್ಷಿಸಬಹುದೆ :)

ನಿಮ್ಮ ಗೆಳೆಯ,
ಶಿವ್

3:34 AM  
Blogger Sanath said...

ಓಲೆಗರಿ ಯವರೆ ನಮಸ್ಕಾರ,

Talk time ಬದಲು ಬರೀ time ಸಿಕ್ಕಿದ್ದಿದ್ದರೆ....
ಎಂಬುದು ನೂರಕ್ಕೆ ನೂರು ಸತ್ಯ .
ನಿಮ್ಮಂತೆ ನಾನು ...ನಮ್ಮಂತೆ ಎಲ್ಲರೂ so called BUSY ...ಎಲ್ಲರಿಗೂ time ಸಿಗಲಿ ..ನಿಮಗೆ ಇನ್ನು time ಸಿಕ್ಕಿ ವಾರಕ್ಕೊಂದು ಪತ್ರ ಬರೆಯುವಂತಾಗಲಿ ..
ಇದೇ ನನ್ನ ಹಾರೈಕೆ.

12:01 PM  
Blogger Unknown said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

7:45 PM  
Anonymous Anonymous said...

My full compliments, that's a really sharp article! I dare say! It was superb! After all, life can be mathematically modelled as a subset of various times allocated appropriately! :)
--------------------
http://quillpad.in/kannada/
The one true Indian site to Offer Kannada language solutions with middle english options.
Fast, Reliable and comfortable! Intuitive! :-)

5:03 PM  

Post a Comment

<< Home